ಸಸ್ಯ ಸ೦ಗಮವಾದ ಮಲೆನಾಡು ಕಾಡುಗಳಲ್ಲಿ ಏಕಾ೦ಗಿಯಾಗಿ ಅಲೆದಾಡುವುದು ನನಗೆ ಬಾಲ್ಯದಿ೦ದ ಹತ್ತಿಕೊ೦ಡ ಗೀಳು.
ಅ೦ಥಹ ಏಕಾ೦ಗಿ ಮತ್ತು ಅಲೆಮಾರಿ ನಡಿಗೆ ನನ್ನ ತಲೆಯಲ್ಲಿ ಚಿ೦ತನೆಯ ಕುಲುಮೆ ಹೊತ್ತಿಸುತ್ತಿತ್ತು. ಕಾಡಿನ ಎಲ್ಲ ವಿಸ್ಮಯಗಳು ನನ್ನಲ್ಲಿ ಕುತೂಹಲ ಕೆರಳಿಸುತ್ತಿದ್ದವು.ಸ೦ಜೆ ಕೊಟ್ಟಿಗೆಗೆ ಹಿ೦ದಿರುಗದ ಹಸುಗಳನ್ನು ಹುಡುಕುವ ನೆಪಮಾಡಿ ಮನೆಯ ಸುತ್ತಲಿನ ಕಾಡುಗಳನ್ನು ಅಲೆದಾಡುವುದು ನನಗೆ ಹೈಸ್ಕೂಲು ದಿನಗಳಲ್ಲಿ ಹವ್ಯಾಸವಾಗಿತ್ತು.
ಕಾಲು ಹಾದಿ, ಕಡಿದಾದ ಕಣಿವೆ ಹಳ್ಳ, ತೋಟ. ಮತ್ತು ಕೆರೆ ಕು೦ಟೆಗಳನ್ನೆಲ್ಲ ಅಲೆದಾಡುವ ನನಗೆ, ಕಾಲಿಗೆ ತಗಲುವ ಬಳ್ಳಿಯಿ೦ದ ಹಿಡಿದು ಅಲ್ಲಲ್ಲಿ ಗು೦ಯ್ ಗುಟ್ಟುವ ಜೇರು೦ಡೇ ಹುಳಗಳ ವರೆಗೂ ಎಲ್ಲವೂ ವಿಸ್ಮಯದ ಸೃಷ್ಠಿ ಅನ್ನಿಸುತ್ತಿದ್ದವು.
ಸಹ್ಯಾದ್ರಿಯೆಂಬ ಸಹ್ಯಾದ್ರಿಗೇ ಸದಾ ಹಿನ್ನೆಲೆ ಸ೦ಗೀತ ನೀಡುವ ವಿದ್ವಾನ್ ಡಾ. ಜೀರು೦ಡೆ ಗಳನ್ನು ಕಾಡನ್ನು ನೆಚ್ಚುವ ನಾನು ಸದಾ ಸ್ಮರಿಸ ಬೇಕು. ಅವಕ್ಕೆ ಪ್ರಚಾರ ಇಷ್ಟವಿಲ್ಲದಿದ್ದರೊ ನಿಮಗೆ ಪರಿಚಯಿಸುತ್ತೇನೆ.
ಕಣಿವೆಸಾಲುಗಳಲ್ಲಿ ಸಾಮೂಹಿಕವಾಗಿ ಸ೦ಗೀತ ಘೋಷ್ಠಿ ನಡೆಸುವ ಇವುಗಳು ಬೇಸರ ವಿಲ್ಲದ ಜೀವಿಗಳು. ದಟ್ಟ ಪೊದೆಗಳಲ್ಲಿ ಕುಳಿತು ವಿರ್ರ್...ವೀರ್ ...ವಿರ್.ವಿರ್..ವಿರ್ ..ಎ೦ದು ದ್ವನಿ ಏರಿಸುತ್ತಾ ತಾಸು ಗಟ್ಟಲೆ ಹಾಡಿ ಪ್ರಾರ೦ಭದ ಶೈಲಿಯಲ್ಲೇ ಹಾಡು ಮುಗಿಸೊದು ಅವುಗಳಿಗೆ ವ೦ಶ ಪಾರ೦ಪರೆಯಿ೦ದ ಬ೦ದ್ದದ್ದು ಅಂತ ಕಾಣುತ್ತದೆ. ಒ೦ದು ತಂಡ ಜೀರುಂಡೆ ಹಾಡಿ ಮುಗಿಸುತ್ತಿದ್ದ೦ತೆ ಮತ್ತೊ೦ದು ಅಂತ್ಯಾಕ್ಷರಿ ಹಾಡಲು ಪ್ರಾರ೦ಬಿಸುತ್ತವೆ. ಇಡೀ ಕಾಡಿನ ರೌದ್ರತೆಗೆ ಈ ಜೀರುಂಡೆಗಳದೇ ಪಾತ್ರ ಬಿಡಿ. ಸದಾ ಸ೦ಗೀತದಲ್ಲೇ ಮುಳುಗುವ ಇವುಗಳ ಗಾತ್ರ ನಮ್ಮ ಹೆಬ್ಬೆರಳಿನಷ್ಟೇ, ಬೆರಳ ತುದಿಯಿ೦ದ ಒ೦ದುವರ ಇ೦ಚಿನಷ್ಟು ಉದ್ದವಿರುತ್ತದೆ. ಹೋಲಿಕೆಯಲ್ಲಿ ಜೇನು ನೊಣದ೦ತೆ ಕ೦ಡರೊ ಬಣ್ಣದಲ್ಲಿ, ಸ್ವಬಾವ ದಲ್ಲಿ ಬಹಳ ವಿಬಿನ್ನ. ಕೆಲವೂಮ್ಮೆ ಜೀರುಂಡೆಗಳನ್ನು ಪರಿಶೀಲಿಸಲೆ೦ದೇ ಹೋಗಿದ್ದುಂಟು,
ಮೆಲ್ಲಗೆ ಹತ್ತಿರ ಹೋದರೆ, ನನ್ನ ಕಿವಿಗಳು ಸಹಿಸದ ಮಟ್ಟಕ್ಕೆ ಕಿರುಚುತ್ತಿರುವ ಜೀರು೦ಡೆಗಳು ತಟ್ಟನೆ ತನ್ನ ಬಿಲಸೇರಿದವು. ಆ ತಕ್ಷಣ ಆ ಸ್ಥಳ ಮೌನವಾದರೊ ನನ್ನ ತಲೆಯಲ್ಲಿ ಶಬ್ದ ಮಾತ್ರ ಗು೦ಯ್ ಗುಡುತ್ತಲೇ ಇದ್ದದನ್ನು ಗಮನಿಸಿದೆ. ತರ೦ಗಾ೦ತ ರ೦ಗವಾಗಿ ಹೊರಹೊಮ್ಮುವ ಈ ಸ೦ಗೀತವನ್ನು ಕೇಳುವವರಲ್ಲಿ ರಸಿಕತೆಗಿ೦ತ ತಾಳ್ಮೆ ಹೆಚ್ಚಿರಬೇಕು. ನನಗಿದ್ದ ಕುತೂಹಲ ಇಷ್ಟು ಚಿಕ್ಕ ಯಕಶ್ಚಿತ್ ಹುಳು ಅರಣ್ಯದ ಮೌನವನ್ನೇ ಮುರಿಯುವ ಶಬ್ದಹೊರಡಿಸುವುದು ಹೇಗೆ, ನನಗಂತೂ ಇದು ಯಾವತ್ತಿಗೂ ಪರಮಾಶ್ಚರ್ಯ ಬಿಡಿ.
ನಾವಿನ್ನೂ ಚಿಕ್ಕವರಿದ್ದಾಗಲಂತೂ ಈ ಜೀರುಂಡೆಗಳ ಬೆನ್ನು ಹತ್ತಿಬಿಡುತ್ತಿದ್ದೆವು, ಅವು ಎಲ್ಲಿಂದ ಕೂಗುತ್ತಿವೆ ಎಂಬುದನ್ನು ಕಂಡುಹಿಡಿಯುವುದೇ ಸಾಹಸದ ಕೆಲಸ, ಕಣ್ಣಿಗೆ ಕಾಣದ ಜೀರುಂಡೆಗಳ ದಿಕ್ಕನ್ನು ಕಿವಿಯಿಂದಲೇ ಜಾಣತನದಿಂದ ಗುರುತಿಸಬೇಕಿತ್ತು. ತಮ್ಮ ಬಿಲದ ಮು೦ದೆ ಕುಳಿತು ಕಿರುಚಿ ಕೊಳ್ಳುವುದು ಅವುಗಳ ಅಬ್ಯಾಸವಾಗಿತ್ತು ನಾನು ಮತ್ತು ನನ್ನ ತಮ್ಮಅರವಿಂದ ಉಪಾಯಮಾಡಿ ಅದರ ಬಿಲವನ್ನು ಮುಚ್ಚಿ ಹುಳದ ಮೆಲೇ ಬಟ್ಟೆಯನ್ನು ಹಾಸಿ ಹಾರಿ ಹೋಗದಂತೆ ಹಿಡಿದುಬಿದುತಿದ್ದೆವು., ಜೀರುಂಡೆಯನ್ನು ಬೆಂಕಿ ಪೊಟ್ಟಣದಲ್ಲಿ ತುಂಬಿ ಓದುವ ಕೋಣೆಯಲ್ಲಿ ಇಟ್ಟುಕೊಂಡು ಅವು ಕಿರುಚಿ ಕೊಳ್ಳುವುದು ಕಾಯುತ್ತಿದ್ದೆವು. ನಮ್ಮ ಉಪಾಯ ಪಲಿಸುತ್ತಿರಲ್ಲಿಲ್ಲ. ಸಂಗೀತ ಸಂತೋಷದ ಸ್ವತ್ತೇ ಹೊರತು ಹಿಂಸೆಯ ಸ್ವತ್ತಲ್ಲ ನಾವೇ ನಿರಾಶರಾಗಿ ಬಿಟ್ಟು ಬಿಡುತ್ತಿದ್ದೆವು. ಒಂದೆರಡು ಬಾರಿ ಪ್ರಯತ್ನಿಸಿ ನಂತರ ಆ ಯೋಜನೆ ಕೈ ಬಿಟ್ಟೆವು. ನನಗೆ ಜೀರುಂಡೆಗಳು ನೆನಪಾದಾಗಲೆಲ್ಲ ಬೆಂಗಳೂರಿನಲ್ಲಿ ಆಟೋಗಳು ಇಷಾರಾಮಿ ಕಾರುಗಳ ರೌರವ ಶಬ್ಧಗಳ ಮದ್ಯೆ ನನಗೆ ಜೀರುಂಡೆಗಳ ಶಬ್ಧ ನೆನಪಾಗುತ್ತಿದೆ.